ಕಲ್ಲನ್ನು ತೆಗೆಯುವುದು : ಭೂಗರ್ಭದಿಂದ ಕಲ್ಲನ್ನು ತೆಗೆಯುವ ಕಲೆ (ಸ್ಟೋನ್ ಕ್ವಾರಿಯಿಂಗ್). ಹಿಂದೆ ಕಲ್ಲನ್ನು ತೆಗೆಯುತ್ತಿದ್ದ ಒರಟಾದ ಕ್ರಮಗಳು ಹೋಗಿ ಈಗ ದಕ್ಷವಾದ ಯಾಂತ್ರಿಕ ವಿಧಾನಗಳು ಬಂದಿವೆ. ವ್ಯಾಪಾರಕ್ಕಾಗಿ ತೆಗೆಯುವ ಕಲ್ಲುಗಳು: ೧ ಅಗ್ನಿಜನ್ಯ, ೨ ಜಲಜ, ೩ ಪರಿವರ್ತಿತ-ಈ ವರ್ಗಗಳಿಗೆ ಸೇರಿವೆ. ಮೊದಲನೆಯ ವರ್ಗದಲ್ಲಿ ಗ್ರಾನೈಟ್ ಮುಖ್ಯವಾದದ್ದು. ಎರಡನೆಯ ವರ್ಗದಲ್ಲಿ ಸುಣ್ಣಕಲ್ಲುಗಳು, ಮರಳುಕಲ್ಲುಗಳು, ಷೇಲುಗಳು ಸೇರಿವೆ. ಇವು ಪದರ ಪದರವಾಗಿರುತ್ತವೆ. ಮೂರನೆಯ ವರ್ಗದಲ್ಲಿ ಮೊದಲ ಎರಡು ವರ್ಗಗಳ ಕಲ್ಲುಗಳು ಪರ್ವತಗಳ ಸೃಷ್ಟಿಯಲ್ಲಿ ಪ್ರಚಂಡವಾದ ಒತ್ತಡಕ್ಕೆ ಸಿಕ್ಕಿ ಮಾರ್ಪಾಡಾಗಿರುತ್ತವೆ.

ಕಲ್ಲಿನ ಕೈಗಾರಿಕೆಯಲ್ಲಿ ಮುಖ್ಯವಾಗಿ ತೆಗೆಯುವ ಕಲ್ಲುಗಳು: ೧ ಕಮಾನಿನ ಕಲ್ಲುಗಳು, ೨ ಕಟ್ಟಡದ ಕಲ್ಲುಗಳು, ೩ ಕಲ್ಲಿನ ಜಲ್ಲಿ. ನೆಲದ ಮೇಲಿರುವ ಗಟ್ಟಿಯಾದ ಗ್ರಾನೈಟಿನ ಬಂಡೆಗಳನ್ನು ಅವುಗಳಿಂದ ಅಲ್ಲಲ್ಲಿ ಸಣ್ಣ ಕುಳಿಗಳನ್ನು ಮಾಡಿ ಸುತ್ತಿಗೆಗಳಿಂದ ಹೊಡೆದು ಸೀಳಿ ದಿಮ್ಮಿಗಳನ್ನು ತೆಗೆಯುತ್ತಾರೆ. ದಿಮ್ಮಿಗಳನ್ನು ಕಮಾನಿನ ಕಲ್ಲಿನ ಅಳತೆಗಿಂತ ಕೊಂಚ ದೊಡ್ಡದಾಗಿ ಸೀಳಿ ಬೇಕಾದ ಆಕಾರಕ್ಕೆ ಮತ್ತು ಅಳತೆಗೆ ಉಳಿಗಳಿಂದ ನಯವಾಗಿ ಮಾಡುತ್ತಾರೆ.

ಕಟ್ಟಡಗಳನ್ನು ಕಟ್ಟುವ ಅಳತೆಗಲ್ಲುಗಳನ್ನು ಈಗಲೂ ಅಂದವಾದ ಹೊರಮುಖವುಳ್ಳ ದೊಡ್ಡ ಮನೆಗಳನ್ನು, ಕಚೇರಿಗಳನ್ನು ನಿರ್ಮಿಸಲು (ಒಳ್ಳೆಯ ಕಲ್ಲು ಸಿಕ್ಕುವ ಕಡೆಗಳಲ್ಲಿ) ಬಳಸುತ್ತಿದ್ದಾರೆ. ಎಲ್ಲ ಬಂಡೆಗಳಿಂದಲೂ ಲಕ್ಷಣವಾದ ಅಳತೆಗಳನ್ನು ತೆಗೆಯಲಾಗುವುದಿಲ್ಲ. ಬಣ್ಣದಲ್ಲಿಯೂ ಕಣಗಳ ಗಾತ್ರದಲ್ಲಿಯೂ ಕಲ್ಲು ಏಕರೀತಿಯದಾಗಿರಬೇಕು. ಎಲ್ಲ ಕಲ್ಲುಗಳಲ್ಲಿಯೂ ಸಂಧಿಗಳಿರುತ್ತವೆ (ಜಾಯಿಂಟ್ಸ್‌). ಇವು ತೀರ ಹತ್ತಿರವಾಗಿದ್ದರೆ ದೊಡ್ಡ ಕಲ್ಲುಗಳನ್ನು ಸೀಳುವುದಕ್ಕಾಗುವುದಿಲ್ಲ.

ಕಲ್ಲನ್ನು ಸೀಳಲು ಅನುಕೂಲವಾದ ಬಂಡೆ ದೊರೆತಮೇಲೆ ಮೇಲಿನ ಮಣ್ಣನ್ನು ತೊಡಿ ತೆಗೆದು ಕಲ್ಲು ಹೊರಕ್ಕೆ ಕಾಣುವ ಹಾಗೆ ಮಾಡಬೇಕು. ಈ ಕೆಲಸದಲ್ಲಿ ಡೈನಮೇಟಿನಂಥ ಸ್ಫೋಟಕಗಳಿಂದ ಪ್ರಯೋಜನವಿಲ್ಲ. ಅವಶ್ಯವಾದ ಕಡೆ ಕರಿಯ ಮದ್ದನ್ನು ಉಪಯೋಗಿಸಿ ದಿಂಡುಗಳನ್ನು ಒಡೆದು ಅವನ್ನು ಸೀಳಿ ಅಳತೆಗಲ್ಲುಗಳನ್ನು ತೆಗೆಯಬೇಕು. ಸಾಮಾನ್ಯವಾಗಿ ಕರಿಯ ಮದ್ದನ್ನೂ ಬಳಸದೆ ಬಂಡೆಯ ಒಂದು ಮುಖವನ್ನು ೩'-೪' ಆಳದ ವರೆಗೂ ಅಂಚಿನಿಂದ ಸುಮಾರು ೩' ದೂರದಲ್ಲಿ ಹತ್ತಿರ ಹತ್ತಿರವಾಗಿ ಕುಳಿಗಳನ್ನು ಹಾಕಿ ಮಧ್ಯದ ದಿಂಡನ್ನು ಅವುಗಳಿಂದ ಸೀಳುತ್ತಾರೆ. ಆಮೇಲೆ ಬೇಕಾದ ಅಳತೆಗೆ ಕಲ್ಲುಗಳನ್ನು ತೆಗೆಯುತ್ತಾರೆ.

ಕೈಯಿಂದ ಕೆಲಸಮಾಡುವಾಗ ದಿಮ್ಮಿಗಳು ಚಿಕ್ಕದಾಗಿರುತ್ತವೆ. ಯಂತ್ರಗಳನ್ನು ಉಪಯೋಗಿಸಿದಾಗ ದೊಡ್ಡ ಆಳತೆಯ ದಿಮ್ಮಿಗಳನ್ನು ತೆಗೆದು ಆಮೇಲೆ ಒತ್ತಡದ ಗಾಳಿಯಿಂದ ಕುಳಿಗಳನ್ನು ತೋಡಿ ಬೇಕಾದ ಅಳತೆಗೆ ಅವುಗಳಿಂದ ಗುರುತುಮಾಡಿ ಸೀಳಿಕೊಳ್ಳುತ್ತಾರೆ. ದಿಂಡುಗಳನ್ನು ಲಾರಿಗಳ ಮೇಲೆ ಕೆಲಸದ ಹತ್ತಿರಕ್ಕೆ ಸಾಗಿಸಿ ಇಷ್ಟವಾದ ಅಳತೆಯಲ್ಲಿ, ರೀತಿಯಲ್ಲಿ, ನಯವಾಗಿ ಮಾಡುತ್ತಾರೆ. ಗುಂಡಾದ ಕಂಬಗಳನ್ನು ಚರಿಕೆಯ ಯಂತ್ರದಿಂದ ತಯಾರಿಸಬಹುದು. ಚಪ್ಪಡಿಗಳನ್ನು ಉಜ್ಜಿ ಯಾವ ನಯಕ್ಕೆ ಬೇಕಾದರೂ ಇಳಿಸಿಕೊಳ್ಳಬಹುದು.
ಹಿಂದೆ ಕಡಪದ ಕಲ್ಲುಗಳನ್ನು ಮಾಡು, ನೆಲ, ಮಹಡಿಯ ಮೆಟ್ಟಲು-ಇವುಗಳಿಗೆ ಧಾರಾಳವಾಗಿ ಬಳಸುತ್ತಿದ್ದರು. ಭದ್ರಕಾಂಕ್ರೀಟು ಬಂದಮೇಲೆ ಇವನ್ನು ಮಾಡಿಗೆ ಬಳಸುವುದು ನಿಂತುಹೋಗಿದೆ. ನೆಲಕ್ಕೆ ಸಿಮೆಂಟ್ ಕಾಂಕ್ರೀಟನ್ನೂ ಅನೇಕ ಮಾದರಿಗಳ ನೆಲದ ಹಂಚುಗಳನ್ನೂ ಉಪಯೋಗಿಸುತ್ತಾರೆ. ಗಾಳಿ ಮಳೆಗಳಿಗೆ ಒಡ್ಡಿದಾಗ ಕಲ್ಲು ಶಿಥಿಲವಾಗುತ್ತದೆ. ಇಲ್ಲವೆ ಬಣ್ಣ ಕೆಡುತ್ತದೆ. ಆದರೆ ಕಲ್ಲಿನ ಗುಣ ಶ್ರೇಷ್ಠವಾಗಿದ್ದರೆ ಅದು ಮಾಸುವುದಿಲ್ಲ. ಹಿಂದೆ ಭಾರತದಲ್ಲಿ ಗ್ರಾನೈಟ್ ಕಲ್ಲಿನಿಂದಲೂ ಬಳಪದ ಕಲ್ಲಿನಿಂದಲೂ ದೇವಾಲಯಗಳಲ್ಲಿ ಕೊರೆದಿರುವ ವಿಗ್ರಹಗಳೂ ಕಂಬಗಳೂ ಸಾವಿರಾರು ವರ್ಷಗಳ ಮೇಲೂ ಕೆಡದೆ ಇರುವುದನ್ನು ಈಗಲೂ ನಾವು ನೋಡುತ್ತಿದ್ದೇವೆ.

ಕಟ್ಟಡದ ಕಲ್ಲು ಕೆಡಲು ಮುಖ್ಯವಾದ ಕಾರಣಗಳು ಇವು: 
   ನೀರು ಗಡ್ಡೆಕಟ್ಟುವಷ್ಟು ಶೈತ್ಯ, ಇಲ್ಲವೆ ಘನೀಭವಿಸಿದ ಮಂಜು. ಈ ಸ್ಥಿತಿಯಲ್ಲಿ ಕಲ್ಲಿನ ಸಂದುಗಳಲ್ಲಿ ಸಿಕ್ಕಿಕೊಂಡ ನೀರು ಗಡ್ಡೆಕಟ್ಟಿದಾಗ ವಿಸ್ತಾರವಾಗಿ ಕಲ್ಲಿನ ಕಣಗಳನ್ನು ಸಡಲಿಸುತ್ತದೆ. 
   ಮರಳುಗಲ್ಲಿನಲ್ಲಿ ಗಟ್ಟಿಯಾದ ಸಿಲಿಕದ ಕಣಗಳನ್ನು ಬಿಗಿದಿರುವ ಅಂಟಿನ ಸಾಮಗ್ರಿ ಬಲಿಷ್ಠವಾಗಿಲ್ಲದೆ ಇರುವಾಗ ಕಲ್ಲಿನ ರಚನೆಯೇ ಶಿಥಿಲವಾಗಬಹುದು. 
   ಮಳೆಯಲ್ಲಿಯೂ ಗಾಳಿಯಲ್ಲಿರುವ ತೇವದಲ್ಲಿಯೂ ಗಂಧಕದ ಆಮ್ಲಗಳು ಕೊಂಚ ಇರುತ್ತವೆ. ಅವು ಸುಣ್ಣಕಲ್ಲಿನಲ್ಲಿರುವ ಕ್ಯಾಲ್ಸಿಯಂ ಕಾರ್ಬೊನೇಟನ್ನು ಬಹಳ ನಿಧಾನವಾಗಿ ಕೊರೆಯುತ್ತವೆ. 
   ದೂಳು ಮತ್ತು ಮರಳನ್ನು ಹೊತ್ತುತರುವ ಗಾಳಿಯೂ ಒಂದು ಕಾರಣ. ಮರಳು ಗಾಳಿ ಹೆಚ್ಚಾದ ಈಜಿಪ್ಟಿನಲ್ಲಿರುವ ಸ್ವಿಂಕ್ಸ್‌ ವಿಗ್ರಹ ಈ ರೀತಿಯಲ್ಲಿ ಸ್ವಲ್ಪ ಸವೆದು ಹೋಗಿದೆ. 
   ಭಾರತದ ಹಳೆಯ ದೇವಸ್ಥಾನಗಳಲ್ಲಿ, ಕಲ್ಲಿನ ಗೋಪುರದ ಸಂದುಗಳಲ್ಲಿ ಹಕ್ಕಿಗಳು ಬೀಳಿಸಿದ ಬೀಜಗಳಿಂದ ಮಳೆಗಾಲದಲ್ಲಿ ಹುಟ್ಟುವ ಗಿಡಗಳಿಂದಲೂ ಪಾಚಿಯಿಂದಲೂ ಕಲ್ಲುಹೂವಿನಿಂದಲೂ ಹೆಚ್ಚಿನ ಘಾಸಿ ಉಂಟಾಗುತ್ತದೆ. ಕಟ್ಟಡಗಳನ್ನು ನೋಡಿಕೊಳ್ಳುವ ಸಿಬ್ಬಂದಿಯಿರುವ ಕಡೆ ಇವನ್ನು ತೆಗೆಯಬಹುದು. ಆದರೆ ಮೂಲೆಯಲ್ಲಿರುವ ಕಲಾಕೃತಿಗಳೆಷ್ಟೋ ಈ ಕಾರಣದಿಂದ ಉರುಳಿಹೋಗಿವೆ.

ಒಂದೇ ಸಮವಾಗಿ ಶತಮಾನಗಳಿಂದ ಬಿಸಿಲನ್ನೂ ಗಾಳಿಯನ್ನೂ ಎದುರಿಸಿ ನಿಂತಿರುವ ಶ್ರವಣಬೆಳಗೊಳದ ಗೋಮಟೇಶ್ವರ ವಿಗ್ರಹದಲ್ಲಿ ಕೆಲವು ಕಡೆ ಬಹಳ ತೆಳುವಾದ ಪದರಗಳು ಹೊರಬರುತ್ತಿವೆ. ಅದಕ್ಕೆ ಬಣ್ಣವನ್ನು ಬಳಿಯುವ ಹಾಗಿಲ್ಲ. ಸೋಡಿಯಮ್ ಸಿಲಿಕೇಟ್ ಇರುವ ರಾಸಾಯನಿಕಗಳನ್ನು ಬಳಿದಾಗ ಅದು ಸುಣ್ಣದೊಂದಿಗೆ ಸೇರಿ ನೀರಿನಲ್ಲಿ ಕರಗದೆ ಇರುವ ಕ್ಯಾಲ್ಸಿಯಂ ಸಿಲಿಕೇಟ್ ಆಗಿ ಸಣ್ಣ ರಂಧ್ರಗಳನ್ನೂ ಪದರಗಳನ್ನೂ ತುಂಬುತ್ತದೆ.

ಬಂಡೆಯಿಂದ ಹೊಸದಾಗಿ ತೆಗೆದ ಮರಳುಕಲ್ಲಿನ ಒಳಗಡೆ ಕೊಂಚ ತೇವವಿರುತ್ತದೆ. ಅದಕ್ಕಾಗಿ ಎರಡು ಬೇಸಗೆಗಳಲ್ಲಿ ಕಲ್ಲನ್ನು ಮಾಗುವುದಕ್ಕೆ ಬಿಟ್ಟು ಅನಂತರ ನಯವಾದ ಕೆಲಸಗಳಿಗೆ ಉಪಯೋಗಿಸಬೇಕು.
ಕಲ್ಲಿನ ಜಲ್ಲಿ: ಹಿಂದೆ ಕಲ್ಲಿನ ಜಲ್ಲಿಯನ್ನು ಮ್ಯಾಕಡಮ್ ರಸ್ತೆಗಳನ್ನು ರಿಪೇರಿ ಮಾಡುವುದಕ್ಕೂ ತಳಪಾಯದಲ್ಲಿ ಸುಣ್ಣದ ಗಾರೆಯೊಂದಿಗೆ ಬೆರೆಸಿ ಸುಣ್ಣದ ಕಾಂಕ್ರೀಟನ್ನು ತಯಾರಿಸುವುದಕ್ಕೂ ಉಪಯೋಗಿಸುತ್ತಿದ್ದರು. ಈಗ ಕಟ್ಟಡಗಳ ನಿರ್ಮಾಣದಲ್ಲಿಯೂ ಭದ್ರಕಾಂಕ್ರೀಟಿನ ತೊಲೆ, ಮಾಡು ಮುಂತಾದುವುಗಳಲ್ಲಿಯೂ ಆಧುನಿಕ ಜಲಾಶಯ ಕಟ್ಟೆಗಳಲ್ಲಿಯೂ ಜಲ್ಲಿಯ ಉಪಯೋಗ ವಿಶೇಷವಾಗಿದೆ. ಅದನ್ನು ಒಡೆಯುವುದಕ್ಕಾಗಿ ವಿಶಿಷ್ಟವಾದ ಯಂತ್ರಗಳನ್ನು ಉಪಯೋಗಿಸುತ್ತಿದ್ದಾರೆ.

ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿಗಳಿಗೂ ಇತರ ಮುಖ್ಯವಾದ ರಸ್ತೆಗಳಿಗೂ ನಗರಗಳೊಳಗಿನ ಕೆಲವು ರಸ್ತೆಗಳಿಗೂ ಸಿಮೆಂಟ್ ಕಾಂಕ್ರೀಟನ್ನು ಉಪಯೋಗಿಸುತ್ತಿದ್ದಾರೆ. ಇದಕ್ಕಾಗಿ ಸಣ್ಣಜಲ್ಲಿಯ ಬಳಕೆ ಹೆಚ್ಚಾಗುತ್ತಿದೆ. ಟಾರ್, ಮ್ಯಾಕಡಮ್ ರಸ್ತೆಗಳಿಗೆ ಎರಡು ಅಳತೆಯ ಜಲ್ಲಿ ಬೇಕಾಗುತ್ತದೆ.

ಪೂರ್ವದಲ್ಲಿ ಕೃಷ್ಣರಾಜಸಾಗರ, ಮೆಟ್ಟೂರು ಜಲಾಶಯ, ತುಂಗಭದ್ರಾ ಜಲಾಶಯ ಮೊದಲಾದ ನೀರಾವರಿಯ ಕಟ್ಟೆಗಳನ್ನು ಕಲ್ಲುಗಾರೆಯಿಂದ ಕಟ್ಟಿದ್ದಾರೆ. ಮಹಾನದಿಯ ಮೇಲಿನ ಹೀರಾಕೂಡ್ ಕಟ್ಟೆಯಲ್ಲಿ ಮಣ್ಣಿನ ಏರಿ ಕಲ್ಲುಗಾರೆಯ ಕಟ್ಟೆ, ಇವುಗಳ ಜೊತೆಗೆ ಮೇಲೆ ನೀರು ಹರಿಯುವ ಕೋಡಿಯನ್ನು ಸಿಮೆಂಟ್ ಕಾಂಕ್ರೀಟಿನಿಂದ ಕಟ್ಟಿದ್ದಾರೆ. ಈ ಕಟ್ಟೆಗಳಲ್ಲೆಲ್ಲ ಕಲ್ಲು ದೊಡ್ಡ ಪ್ರಮಾಣದಲ್ಲಿ ಬಳಕೆಯಾಗಿದೆ.

ಸಂಪೂರ್ಣವಾಗಿ ಸಿಮೆಂಟ್ ಕಾಂಕ್ರೀಟಿನಿಂದ ಕಟ್ಟುವ ಕಟ್ಟೆಗಳಲ್ಲಿ ಉಪಯೋಗಿಸುವ ಕಾಂಕ್ರೀಟಿಗೆ ಒಂದೇ ಆಳತೆಯ ಜಲ್ಲಿಯನ್ನು ಬಳಸಿದರೆ ಕಾಂಕ್ರೀಟ್ ಮಂದವಾಗುವುದಿಲ್ಲವೆಂದು ಪ್ರಯೋಗಗಳಿಂದ ಗೊತ್ತಾಗಿದೆ. ಅದರ ಒತ್ತಡದ ಬಲವೂ ಸಾಕಷ್ಟು ಹೆಚ್ಚಾಗುವುದಿಲ್ಲ. ಬಿಹಾರಿನಲ್ಲಿ ಶೋಣಾನದಿಯ ಉಪನದಿಯಾದ ರೈಹ್ಯಾಂಡ್ ನದಿಗೆ ಅಡ್ಡಲಾಗಿ ವಿದ್ಯುದುತ್ಪಾದನೆಗಾಗಿ ಕಟ್ಟಿದ ಕಟ್ಟೆಯಲ್ಲಿ ೬ ಅಳತೆಗಳಲ್ಲಿ ಜಲ್ಲಿಯನ್ನು ಒಡೆದು ಮರಳು ಮತ್ತು ಸಿಮೆಂಟನೊಂದಿಗೆ ಬೆರೆಸಿ ಕಾಂಕ್ರೀಟನ್ನು ತಯಾರಿಸಿದ್ದಾರೆ.೧. ೬"-೩", ೨. ೩"-೧ ೧/೨", ೩. ೧ ೧/೨"-೩/೪", ೪. ೩/೪"-೩/೮", ೫. ೩/೮"-೩/೧೬", ೬. ೩/೧೬" ಕ್ಕಿಂತ ಸಣ್ಣದು-ಈಮಿಶ್ರ ಜಲ್ಲಿಯಿಂದ ತಯಾರಿಸಿದ ಕಾಂಕ್ರೀಟಿನ ಬಲ ಒತ್ತಡದಲ್ಲಿ ಚದರ ಅಂಗುಲಕ್ಕೆ ೨,೫೦೦ ಪೌಂಡುಗಳು.

ಪೂರ್ವ ಪಂಜಾಬಿನಲ್ಲಿ ಶತದ್ರುನದಿಗೆ ಅಡ್ಡಲಾಗಿರುವ ೭೬೦' ಎತ್ತರದ ಭಾಕ್ರ ಕಟ್ಟೆಯಲ್ಲಿ ಜಲ್ಲಿಯನ್ನು ೪ ಅಳತೆಗಳಲ್ಲಿ ಒಡೆದಿದ್ದಾರೆ. ೧. ೭"-೩", ಶೇ. ೨೫, ೨. ೩"-೧ ೧/೨", ಶೇ. ೧೯, ೩. ೧ ೧/೨"-೩/೪", ಶೇ. ೧೭, ೪.೩/೪", ಶೇ. ೧೪, ಉಳಿದ ಶೇ. ೨೫ ಮರಳು.

ಹೀಗೆ ಈ ಕಾಲದಲ್ಲಿ ಕಲ್ಲಿನ ಉಪಯೋಗ ನಿರ್ಮಾಣ ಕಾಮಗಾರಿಯಲ್ಲಿ ಶಿಲ್ಪದಲ್ಲಿ ಅನೇಕ ರೂಪಗಳನ್ನು ತಾಳಿದೆ.	(ಎಚ್.ಸಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ